ಗ್ಲ್ಯಾಸ್ಗೋ, ಎಲೆನ್ ಆಂಡ್ಯರ್ಸನ್ ಘೋಲ್ಸನ್ -
	1874- 1945ರಲ್ಲಿ ಅಮೆರಿಕದ ಕಾದಂಬರಿಗಾರ್ತಿ. ವರ್ಜಿನೀಯಾದ ರಿಚ್‍ಮಂಡ್ ಎಂಬ ಸ್ಥಳದಲ್ಲಿ ಜನಿಸಿದಳು. ಹರೆಯದಲ್ಲಿ ಸದಾ ರೋಗಪೀಡಿತಳಾಗಿದ್ದುದರಿಂದ ಸಾಂಪ್ರದಾಯಿಕ ಶಾಲಾ ಶಿಕ್ಷಣ ಪಡೆಯಲಾಗಲಿಲ್ಲ. ಆದರೂ ಸ್ವಪ್ರಯತ್ನದಿಂದ ವಿಶೇಷಾಭ್ಯಾಸ ಮಾಡಿ ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಮೊದಲ ಕಾದಂಬರಿಯನ್ನು (ದಿ ಡಿಸೆಂಡೆಂಟ್ಸ್) ರಚಿಸಿದಳು. ಇದು 1897ರಲ್ಲಿ ಪ್ರಕಟವಾಯಿತು. ಇವಳ ಮತ್ತೊಂದು ಕೃತಿ ದಿ ವಾಯ್ಸ್ ಆಫ್ ದಿ ಪೀಪಲ್ (1900) ಓದುಗರ ಲಕ್ಷ್ಯವನ್ನು ಸೆಳೆಯಿತು. ಈಕೆ ತನ್ನ ಜೀವನಾವಧಿಯಲ್ಲಿ 19 ಕಾದಂಬರಿಗಳಲ್ಲದೆ ಸಣ್ಣ ಕಥೆಗಳು ಕವನಗಳು ಹಾಗೂ ಸಾಹಿತ್ಯಕ ಪ್ರಬಂಧಗಳನ್ನು ಬರೆದಿದ್ದಾಳೆ.

	ಇವಳ ಕೃತಿಗಳೂ ಎಂದಿಗೂ ಪತ್ತೆದಾರಿ ಕಾದಂಬರಿಗಳಷು ಜನಪ್ರಿಯವಾಗಲಿಲ್ಲವಾದರೂ ಈಕೆಯ ಪ್ರತಿಭೆಯನ್ನು ಬಹುವಾಗಿ ಮೆಚ್ಚಿದ್ದರು. ದಕ್ಷಿಣ ಅಮೇರಿಕದ ಬಗ್ಗೆ ಪ್ರಾಮಾಣಿಕವಾಗಿ ಬರೆದ ಮೊದಲ ಕಾದಂಬರಿಕಾರ್ತಿಯೆಂದು ಈಕೆಯನ್ನು ಪರಿಗಣಿಸಲಾಗಿದೆ. ಸಂತೋಷಕ್ಕಾಗಿ ಸೌಖ್ಯಕ್ಕಾಗಿ ಸ್ತ್ರೀಯರು ಕೆಲವೊಮ್ಮೆ ಮಾಡಬೇಕಾದ ಸಾಹಸದ ಹೋರಾಟವನ್ನು ಚಿತ್ರಿಸುವ ಘಟನೆಗಳು ಈಕೆಯ ಕಾದಂಬರಿಯಲ್ಲಿ ಕಾಣಬರುತ್ತವೆ. ಬ್ಯಾರನ್ ಗ್ರೌಂಡ್ (1925) ಎಂಬುದು ಇವಳ ಅತ್ಯುತ್ತಮ ಕಾದಂಬರಿ. ಒಬ್ಬ ಹೆಂಗಸಿನ ನಿರಾಶೆ ಮತ್ತು ಆಧ್ಯಾತ್ಮಿಕ ಗೆಲುವುಗಳ ಗಂಭೀರ ಚಿತ್ರಣವಿರುವ ಈಕೃತಿ ತುಂಬ ಮಾರ್ಮಿಕವಾಗಿದೆ. ವರ್ಜೀನಿಯ (1913) ಮತ್ತು ಲೈಫ್ ಅಂಡ್ ಗ್ರೇಬ್ರಿಲ (1916) ಎಂಬ ಕಾದಂಬರಿಗಳು ಸಮಸ್ಯಾತ್ಮಕವಾದವು. ದಿ ರೊಮ್ಯಾಂಟಿಕ್ ಕಾಮೆಡಿಯನ್ಸ್ (1926), ದೆ ಸ್ಟೂಪ್ಡ್ ಟು ಫಾಲಿ (1926), ದಿ ಷೆಲ್ಟರ್ಡ್ ಲೈಫ್-ಎಂಬುವು ಶಿಷ್ಟಾಚಾರಕ್ಕೆ ಮೀಸಲಾದಂಥವು. ಮಿರುಗುವ ಶೈಲಿ, ಮಾರ್ಮಿಕ ವಿಡಂಬನೆ ಜನರ ಆಂತರಿಕ ಜೀವನ ಚಿತ್ರಣ-ಇವನ್ನು ಈ ಕಾದಂಬರಿಯಲ್ಲಿ ಕಾಣಬಹುದು. ವೆಯಿನ್ ಆಫ್ ಐರನ್ (1935) ಎಂಬುದು ಓದುಗರ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವನ್ನುಂಟುಮಾಡುವಂಥ ಮತ್ತೊಂದು ಉತ್ತಮ ಕಾದಂಬರಿ.

	1941ರಲ್ಲಿ ರಚಿಸಿದ ಇನ್ ದಿಸ್ ಅವರ್ ಲೈಫ್ ಎಂಬ ಕಾದಂಬರಿಗೆ ಪುಲಿಟ್ಜರ್ ಬಹುಮಾನ ಬಂತು (1942). ಇದು ದಕ್ಷಿಣ ಅಮೆರಿಕದ ಸಾಂಪ್ರದಾಯವನ್ನು ಕುರಿತು ಹೇಳುವಂಥದ್ದು. 1943ರಲ್ಲಿ ಈಕೆ ತನ್ನ ಕಾದಂಬರಿಗಳನ್ನು ಕುರಿತ ಒಂದು ವಿಮರ್ಶಾತ್ಮಕ ಮೌಲ್ಯ ನಿರ್ಧರಣೆಯನ್ನು ಎಸರ್ಟನ್ ಮೆಷರ್ ಎಂಬ ಹೆಸರಿನಲ್ಲಿ ಬರೆದಳು. ಈಕೆಯ ಆತ್ಮಚರಿತ್ರೆ ವುಮನ್ ವಿದಿನ್ ಎಂಬ ಕೃತಿ ಈಕೆಯ ಮರಣಾನಂತರ (1954) ಪ್ರಕಟವಾಯಿತು.					(ಯು.ಎಸ್.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ